Thursday, April 12, 2018

ಶಾಂತಿಸಾಗರ(ಸೂಳೆಕೆರೆ) ಯನ್ನು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತಿಸಬೇಕೇ ?

ಸ್ನೇಹಿತರೇ,

ಕೆಲವು ಜನ ಪ್ರತಿನಿಧಿಗಳು, ಬುದ್ದಿ ಜೀವಿಗಳು, ಶಾಂತಿಸಾಗರದ ಅಭಿಮಾನಿಗಳು ಹೇಳುತ್ತಾರೆ ಶಾಂತಿಸಾಗರವನ್ನು ಒಂದು ಪ್ರೇಕ್ಷಣೀಯ ತಾಣವಾಗಿ ಮಾಡಬೇಕು ಎಂದು.

ಮನುಷ್ಯನ ಆಸೆಗೆ ಎಲ್ಲೆ ಇಲ್ಲ, ಈಗಾಗಲೇ ಶಾಂತಿಸಾಗರ ೧೬೦೦ ಎಕರೆಗಳಷ್ಟು ಒತ್ತುವರಿಯಾಗಿದೆ , ಒಂದು ವೇಳೆ ಪ್ರೇಕ್ಷಣೀಯ ಸ್ಥಳವಾಗಿಬಿಟ್ಟರೆ ಸಂಪೂರ್ಣ ಸ್ಥಳ ವ್ಯವಹಾರಿಕ ಕೇಂದ್ರವಾಗುತ್ತದೆ.

ಮಾನವ ಎಂಬ ಜೀವಿ ಎಲ್ಲಿ ಅಭಿವೃದ್ಧಿ ಎಂಬ ಹೆಸರು ಹೇಳಿಕೊಂಡು ವ್ಯವಹಾರಿಕ ಚಿಂತನೆಯೊಂದಿಗೆ ಕಾಲಿಡುತ್ತಾನೆಯೋ ಅಲ್ಲಿ ಪ್ರಕೃತಿಯ ಸರ್ವನಾಶ ಖಚಿತ.

ಸರ್ಕಾರ ಹೇಗೆ ನಮ್ಮ ಕಾಡುಗಳನ್ನು ಆಧುನೀಕರಣವೆಂಬ ಭೂತದ ಮನುಕುಲದ ರಕ್ಕಸರಿಂದ ರಕ್ಷಿಸಲು "ರಕ್ಷಿತ ಅಭಯಾರಣ್ಯ" ಗಳನ್ನು ಘೋಷಿಸಿ ಸಂರಕ್ಷಿಸುತ್ತಿದೆಯೋ ಹಾಗೆಯೇ ನಮ್ಮ ಶಾಂತಿಸಾಗರವನ್ನು "ರಕ್ಷಿತ ಅಭಯಸಾಗರ" ಎಂದು ಗುರುತಿಸಿ ಕೆರೆಯ ಇಂಚು ಭೂಮಿಯೂ ಒತ್ತುವರಿಯಾಗದಂತೆ ತಡೆದು ಕೆರೆಯನ್ನು ಹಿಂದಿನ ಗತ ವೈಭವಕ್ಕೆ ತರುವ ಕೆಲಸ ಮಾಡಬೇಕು.

ಈ ಭೂಮಿಮೇಲೆ ಪ್ರತಿಯೊಂದು ಜೀವಿಗಳಿಗೂ ಸ್ವತಂತ್ರವಾಗಿ ಮತ್ತು ನಿರ್ಭಯವಾಗಿ ಬದುಕುವ ಹಕ್ಕಿದೆ .ಮಾನವ ಸ್ವಲ್ಪ ಬುದ್ದಿಶಾಲಿ ಅಷ್ಟೆ.

ಕೆರೆಗಳಿರುವುದು ನಮಗೆ ಮಾತ್ರವಲ್ಲ .ಅನೇಕ ಪ್ರಾಣಿ, ಪಕ್ಷಿಗಳು ನೇರವಾಗಿ ಅವಲಂಬಿಸಿ ತಮ್ಮ ಬದುಕನ್ನು ಕಟ್ಟಿಕೊಂಡಿವೆ.ಸೂಳೆಕೆರೆಯನ್ನು ನಾವು ಪ್ರೇಕ್ಷಣೀಯ ಸ್ಥಳ ಮಾಡುವುದರಿಂದ ಎಷ್ಟು ನಮಗೆ ಲಾಭಗಳಿವೆಯೋ ಅದಕ್ಕಿಂತ ಹೆಚ್ಚಾಗಿ ಪರಿಸರಕ್ಕೆ ತೋಂದರೆ ಇದೆ.ಅಷ್ಟಲ್ಲದೇ ಅದನ್ನು ಪ್ರೇಕ್ಷಣೀಯ ಸ್ಥಳ ಮಾಡುವ ಅನಿವಾರ್ಯತೆ ಏನಿದೆ.

ಪ್ರೇಕ್ಷಣೀಯ ಸ್ಥಳಗಳು ನೈಸರ್ಗಿಕ ವಾಗಿ ಇದ್ದರೆ ಎಲ್ಲರಿಗೂ ಒಳ್ಳೆಯದು.ತಾಲ್ಲೂಕಿನ ಹೆಸರು ಪ್ರಖ್ಯಾತಿ ಮಾಡಬೇಕೆಂದರೆ ಬೇರೆ ಕೆಲಸಗಳನ್ನು ಮಾಡೋಣ.ಕೆರೆಗಳ ಜೊತೆ ಆಟ ಹಾಡೋದು ಬೇಡ.

ಅದೇ ಹಣವನ್ನು ಕೆರೆಯ ಹೂಳು ಎತ್ತಿಸಲು ಬಳಸಿ.
ಪ್ರೇಕ್ಷಣೀಯ ಸ್ಥಳಮಾಡಿ ಅದರಿಂದ ಬಂದ ಹಣವನ್ನು ಪ್ರಕೃತಿಗೆ ಕೊಟ್ಟು ನೀನು ಚನ್ನಾಗಿರು ಎಂದು ಹೇಳಿದರೆ ಅರ್ಥವಿಲ್ಲ.

ಪ್ರೇಕ್ಷಣೀಯ ತಾಣವನ್ನಾಗಿ ಮಾಡಿ, ನಾವು ಎಷ್ಟೇ ಜವಾಬ್ದಾರಿಯಿಂದ ಕೆರೆಯನ್ನು ಪ್ಲಾಸ್ಟಿಕ್ ಮುಕ್ತ ,ನಿಸರ್ಗಕ್ಕೆ ತೊಂದರೆ ಕೊಡದೆ ಕಾಪಾಡುತ್ತೆವೆ ಎಂದರೂ ಅದು ಅಸಾಧ್ಯ ,ಯಾವುದೋ ಒಂದು ರೀತಿಯಲ್ಲಿ ತೊಂದರೆ ಪರಿಸರಕ್ಕೆ ಕಟ್ಟಿಟ್ಟಬುತ್ತಿ.ಹಾಗಾಗಿ ಸೂಳೆಕೆರೆಯ ಮದ್ಯ ದಲ್ಲಿ ದ್ವೀಪ ಅಥವಾ ಗೆಸ್ಟ್ ಹೌಸ್ ಅವಶ್ಯಕತೆ ಇಲ್ಲ.

ನಾವೆಲ್ಲರೂ ಸೇರಿ ಸಾಯುವ ಅಂಚಿನಲ್ಲಿರುವ ಕೆರೆಯನ್ನು ಉಳಿಸುವ ಕೆಲಸ ಮಾಡೋಣ.

ನಮ್ಮ ಹಿರಿಯರು ಈ ಕೆರೆಯನ್ನು ಕಟ್ಟಿದ ಉದ್ದೇಶ ಕುಡಿಯುವ ನೀರಿಗಾಗಿ ಮತ್ತು ಕೃಷಿಗೆ ಉಪಯೋಗಿಸಲೆಂದು. ಆದರೆ ಇಂದು ನಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತೀದ್ದೇವೆ.

ಶಾಂತಿಸಾಗರದ ವಿಷಯದಲ್ಲಿ ವ್ಯವಹಾರಿಕ ಚಿಂತನೆಬೇಡ. ಕೆರೆಯ ನೈಸರ್ಗಿಕ ಪರಿಸರವನ್ನು ಹಾಳುಗೆಡವುದು ಬೇಡ.

ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ. ತಪ್ಪು ಮಾತನಾಡಿದ್ದರೆ ಕ್ಷಮೆ ಇರಲಿ.

ಇಂದ,
ಹೇಮಂತ್ ಮತ್ತು ರಘು ಬಿ ಆರ್.
ಖಡ್ಗ ಸಂಘ(ರಿ). ಕರ್ನಾಟಕ

No comments:

Mission One Rupee Jan 2020

*Mission One Rupee* ------------------------------------- Month - JANUARY 2020 ------------------------------------- *_Payment Method_* ...